ರೆಡ್ ಇಂಡಿಯನ್ನರು - 
ಅಮೆರಿಕ ಖಂಡದ ಮೂಲ ನಿವಾಸಿಗಳು. ಇವರ ಮೂಲದ ಬಗ್ಗೆ ನಿರ್ದಿಷ್ಟ ಮಾಹಿತಿಗಳಿಲ್ಲ. ಕೊಲಂಬಸ್ ಅಮೆರಿಕ ಖಂಡವನ್ನು ಕಂಡುಹಿಡಿದಾಗ ಅದನ್ನು ಇಂಡಿಯ ಎಂದು ಭಾವಿಸಿದ್ದರಿಂದ ಅಲ್ಲಿನ ನಿವಾಸಿಗಳಿಗೆ ಅಮೆರಿಕನ್ ಇಂಡಿಯನ್ನರೆಂದು ಹೆಸರನ್ನು ಕೊಟ್ಟ. ಅನಂತರ ಇವರು ಇಂಡಿಯನ್ನರಲ್ಲವೆಂದು ತಿಳಿದುಬಂದಾಗ ಇವರನ್ನು ಅಮೆರಿಇಂಡಿಯನ್ನರೆಂದೂ ಮೈಬಣ್ಣ ಕೆಂಪಾಗಿದ್ದರಿಂದ ರೆಡ್‍ಇಂಡಿಯನ್ನ ರೆಂದೂ ಕರೆಯಲಾಯಿತು.

ಅಮೆರಿಕ ಖಂಡದಲ್ಲಿ ಪ್ರಾಗೈತಿಹಾಸಿಕ ಕಾಲದಲ್ಲಿ ಜನವಸತಿ ಯಿರಲಿಲ್ಲ. ಸು. 40,000 ವರ್ಷಗಳ ಹಿಂದೆ ಅಲಾಸ್ಕ ಮಾರ್ಗವಾಗಿ ಏಷ್ಯದಿಂದ ಮೊದಲ ವಲಸೆಯುಂಟಾದುದಕ್ಕೆ ಪ್ರಾಕ್ತನ ಮಾಹಿತಿಗಳಿವೆ.

ಮೊದಲ ವಲಸೆಗಾರರು ಭಾಷೆ, ಬೆಂಕಿ, ಉಪಕರಣಗಳು, ಉಡುಗೆಗಳು ಮತ್ತು ವಾಸಯೋಗ್ಯವಾದ ಮನೆಗಳ ಬಗ್ಗೆ ಪರಿಜ್ಞಾನ ಪಡೆದಿದ್ದುದರಿಂದ ಅತಿ ಶೀತವಲಯವಾದ ಉತ್ತರ ಧ್ರುವ ಪ್ರದೇಶವನ್ನು ಹಾದುಬರಲು ಸಾಧ್ಯವಾಯಿತು. ಈಗಿನ ಬೇರಿಂಗ್ ಜಲಸಂಧಿ ಹಿಮಯುಗದ ಪ್ರಭಾವದಿಂದ ಸಮುದ್ರಮಟ್ಟ ಬಹಳ ಕಡಿಮೆಯಾಗಿದ್ದು ಭೂಸೇತುವೆ ರೂಪದಲ್ಲಿ ಅಮೆರಿಕಕ್ಕೆ ಭೂಮಾರ್ಗವನ್ನು ಒದಗಿಸಿತ್ತು. ಈ ಸೇತುವೆಯ ಮೂಲಕ  12,000-14,000 ವರ್ಷಗಳಷ್ಟು ಹಿಂದೆ ಏಷ್ಯ ಖಂಡದ ಪ್ರಾಣಿಗಳು ಮತ್ತು ಮಾನವ ಉತ್ತರ ಅಮೆರಿಕವನ್ನು ಪ್ರವೇಶಿಸಿದರೆಂದು ತಿಳಿದುಬರುತ್ತದೆ. ಈ ವಲಸೆಗಾರರು ಮಂಗೊ ಲಾಯಿಡ್ ಜನಾಂಗಕ್ಕೆ ಸೇರಿದವರಾಗಿದ್ದರು. ಇವರ ದೈಹಿಕ ಲಕ್ಷಣಗಳನ್ನು ಹೀಗೆ ಹೇಳಬಹುದು: ಕಪ್ಪು ಕಣ್ಣುಗಳು ಮತ್ತು ಕೂದಲು, ಮಧ್ಯಮ ಕಂದುಬಣ್ಣದ ಚರ್ಮ, ಮೈಮೇಲೆ ಅಲ್ಪ ಪ್ರಮಾಣದ ಕೂದಲು ಅಥವಾ ಪೂರ್ಣ ಕೂದಲುರಹಿತ ದೇಹ. ಇವರಲ್ಲಿ ಎರಡು ಗುಂಪುಗ ಳಿದ್ದವು. ಒಂದು ಗುಂಪು ಪ್ರಕೃತಿಯಲ್ಲಿ ಸ್ವಾಭಾವಿಕವಾಗಿ ದೊರೆಯುವ ಬೀಜ ಮತ್ತು ಧಾನ್ಯಗಳನ್ನು ಸಂಗ್ರಹಿಸಿ ಜೀವಿಸುತ್ತಿದ್ದರೆ ಇನ್ನೊಂದು ಗುಂಪು ಬೇಟೆಯಿಂದ ಆಹಾರ ಸಂಪಾದನೆ ಮಾಡಿಕೊಳ್ಳುತ್ತಿತ್ತು. ಕೆಲವರು ಮೀನುಗಾರರಾಗಿ ಜೀವನ ನಡೆಸುತ್ತಿದ್ದರು. ಹೊಸ ಹೊಸ ವಲಸೆ ತಂಡಗಳು ಬರಲಾರಂಭಿಸಿದಾಗ ಮೊದಲ ಗುಂಪು ದಕ್ಷಿಣದತ್ತ ಚಲಿಸಿತ್ತು. ಕಡಿಮೆ ಶೀತವಿದ್ದ ಆ ಪ್ರದೇಶಗಳಲ್ಲಿ ವಿಪುಲವಾದ ಪ್ರಾಣಿ ಸಂಪತ್ತು ಇದ್ದುದರಿಂದ ಜನಸಂಖ್ಯೆ ಶೀಘ್ರವಾಗಿ ವೃದ್ಧಿಗೊಳ್ಳಲಾ ರಂಭಿಸಿತ್ತು. ಹಿಮಯುಗ ಅಂತ್ಯವಾದಾಗ ಹೊಸಜೀವನ ರೀತಿಗಳು ಇವರಿಗೆ ಲಭ್ಯವಾದವು. ಹೊಸ ಮಾರ್ಗಗಳ ಮೂಲಕ ಹೆಚ್ಚಿನ ವಲಸೆ ತಂಡಗಳು ಬಂದವು. ಕಡೆಯ ಭಾಗದ ವಲಸೆ ತಂಡಗಳಲ್ಲಿ ಎಸ್ಕಿಮೊ (ನೋಡಿ- ಎಸ್ಕಿಮೋ) ಜನರು ಪ್ರಮುಖರು. ಅವರು ಧ್ರುವ ಪ್ರದೇಶದಲ್ಲಿ ವಾಸಿಸಲು ಯೋಗ್ಯವಾದ ಉಪಕರಣಗಳೊಂದಿಗೆ ಸಜ್ಜಾಗಿದ್ದರು. ಕ್ರಿ.ಪೂ. ಸು. 1000ದಲ್ಲಿ ಅವರು ಉತ್ತರ ಭಾಗದಲ್ಲಿ ನೆಲಸಿ ಹೊಸ ವಲಸೆಗಾರರನ್ನು ತಡೆದರು.

ರೆಡ್ ಇಂಡಿಯನ್ನರ ಸಂಸ್ಕøತಿಯನ್ನು ಎರಡು ವಿಧವಾಗಿ ವಿಂಗಡಿಸ ಬಹುದು. (1) ಬೀಜ ಮತ್ತು ಧಾನ್ಯ ಸಂಗ್ರಾಹಕರು. ಇವರೇ ಸಸ್ಯಸಮೃದ್ಧಿ ಯಾದ ಮಧ್ಯಪೂರ್ವ ಭಾಗಗಳ ಸಂಗ್ರಾಹಕರು. (2) ಬೇಟೆಗಾರರು. ಇವರೇ ಮಧ್ಯ-ಪಶ್ಚಿಮ ಭಾಗಗಳ ಬೇಟೆಗಾರರು; ಈ ಪ್ರದೇಶದಲ್ಲಿ ವಿಪುಲ ಪ್ರಾಣಿ ಸಂಪತ್ತಿತ್ತು.

ಅಮೆರಿಕದ ವಿವಿಧ ಭಾಗಗಳಲ್ಲಿ ಕೃಷಿ ಸ್ವತಂತ್ರವಾಗಿ ಪ್ರಾರಂಭವಾ ಯಿತು. ಇವರ ಎಲ್ಲ ಮುಖ್ಯ ಕೃಷಿ ಉತ್ಪನ್ನದ ಸಸ್ಯರಾಶಿ ಸ್ಥಳೀಯವಾದು ದಾಗಿತ್ತು. ಇವುಗಳಲ್ಲಿ ಮುಖ್ಯವಾದುದು ಮೆಕ್ಕೆಜೋಳ. ಮಧ್ಯ ಅಮೆರಿಕ ದಲ್ಲಿ ಮೆಕ್ಕೆಜೋಳವನ್ನು ಬೀನ್ಸ್ ಮತ್ತು ಸ್ಕ್ವಾಶ್ ತರಕಾರಿ ಬೆಳೆಗಳ ಜೊತೆಗೆ ಬೆಳೆಸುತ್ತಿದ್ದರು. ರೆಡ್ ಇಂಡಿಯನ್ನರು ಇವುಗಳನ್ನು ಪವಿತ್ರ ಸಹೋದರಿಯರು ಎಂದು ಕರೆಯುತ್ತಿದ್ದರು. ಇವರಲ್ಲಿ ಪಳಗಿಸಿದ ಕೆಲವೇ ಪ್ರಾಣಿಗಳು ಇದ್ದುವು. ಆದ್ದರಿಂದ ಪ್ರಾಣಿಸಂಗೋಪನೆಯ ಉದ್ಯೋಗ ಅಭಿವೃದ್ಧಿಯಾಗಿರಲಿಲ್ಲ. ಕೆಲವು ಪ್ರದೇಶಗಳಲ್ಲಿ ನಾಯಿಗಳನ್ನು ಸಂಚಾರ ಸಾರಿಗೆಗೆ ಬಳಸಿಕೊಳ್ಳುತ್ತಿದ್ದರು.

ಮಧ್ಯ ಮತ್ತು ದಕ್ಷಿಣ ಅಮೆರಿಕ ನಾಗರಿಕತೆಗಳು: ಅಮೆರಿಕದ ಎಲ್ಲ ನಾಗರಿಕತೆಗಳು ರಿಯೋಗ್ರೇಂಡಿಯದ ದಕ್ಷಿಣಕ್ಕೆ ಉದಯಿಸಿದವು. ಮಧ್ಯ ಮತ್ತು ದಕ್ಷಿಣ ಅಮೆರಿಕದ ಎಲ್ಲ ರೆಡ್ ಇಂಡಿಯನ್ನರು ಉತ್ತರ ಅಮೆರಿಕದ ಮೂಲಕ ಬಂದವರಾದರೂ ಇವರಿಗೆ ಉತ್ತರ ಅಮೆರಿಕದಲ್ಲಿ ನಾಗರಿಕತೆಯನ್ನು ಬೆಳೆಸಲು ಆಗಲಿಲ್ಲ. ಪಟ್ಟಣಗಳನ್ನೂ ಕಟ್ಟಲಿಲ್ಲ.

ಉತ್ತರದಿಂದ ದಕ್ಷಿಣಕ್ಕೆ ಬರಲು ರೆಡ್ ಇಂಡಿಯನ್ನರು ಕೆಲವು ಸಾವಿರ ವರ್ಷಗಳನ್ನು ತೆಗೆದುಕೊಂಡರು. ದಕ್ಷಿಣದಲ್ಲಿ ಮೂಲ ಕೃಷಿ ಉತ್ಪನ್ನವಾದ ಮೆಕ್ಕೆಜೋಳವನ್ನು ಅಭಿವೃದ್ಧಿಪಡಿಸಲು ಇವರಿಗೆ ಸಾಧ್ಯವಾಯಿತು. ಇದರ ಆಧಾರದಿಂದ ಜನಸಂಖ್ಯೆ ಬೃಹತ್ತಾಗಿ ಬೆಳೆಯಿತು. ಈ ನಾಗರಿಕತೆಗಳು 16ನೆಯ ಶತಮಾನದವರೆಗೆ ಉಚ್ಛ್ರಾಯ ಸ್ಥಿತಿಯಲ್ಲಿದ್ದವು. ಸ್ಪೇನಿನ ಆಕ್ರಮಣಕಾರರು 16ನೆಯ ಶತಮಾನದಲ್ಲಿ ದಕ್ಷಿಣ ಅಮೆರಿಕಕ್ಕೆ ಬಂದು ಈ ನಾಗರಿಕತೆಗಳ ಅವನತಿಗೆ ಕಾರಣರಾದರು. ಮಧ್ಯ ಮತ್ತು ದಕ್ಷಿಣ ಅಮೆರಿಕದ ಹಲವು ಉನ್ನತ ಸಂಸ್ಕøತಿಗಳಲ್ಲಿ ಮಾಯಾ, ಆಜ್ಟೆಕ್ ಮತ್ತು ಇಂಕ ಇವು ಮೂರು ಮುಖ್ಯವಾದುವು. ಮಾಯಾ (ನೋಡಿ- ಮಾಯಾ) ನಾಗರಿಕತೆ ಮಧ್ಯ ಅಮೆರಿಕದ ತಗ್ಗುಪ್ರದೇಶದಲ್ಲಿ ಹುಟ್ಟಿದರೆ, ಆಜ್ಟೆಕ್ ನಾಗರಿಕತೆ (ನೋಡಿ- ಆಜ್ಟೆóಕ್-ಸಂಸ್ಕøತಿ) ಎತ್ತರದ ಚಪ್ಪಟೆ ಭೂಪ್ರದೇಶದಲ್ಲಿ (ಮೆಕ್ಸಿಕೋ) ಹುಟ್ಟಿತು. ಇಂಕ (ನೋಡಿ- ಇಂಕ) ನಾಗರಿಕತೆ ದಕ್ಷಿಣ ಅಮೆರಿಕದ ಪಶ್ಚಿಮ ಸಮುದ್ರ ತೀರದಲ್ಲಿ ಉಗಮಿಸಿತು.

ರೆಡ್ ಇಂಡಿಯನ್ ಜನವರ್ಗ: ಅಮೆರಿಕದಲ್ಲಿ ನೂರಾರು ರೆಡ್ ಇಂಡಿಯನ್ ಜನವರ್ಗಗಳಿವೆ. ಅಪಾಚಿ, ನವಾಹೋ, ಕ್ರೀ, ಒಜಿಬ್‍ವಾ, ಜೆಯಿನ್ನೆ, ಅರಪಾಹೋ, ಇರೊಕ್ವೊಯಿಸ್, ಒಮಾಹಾ, ಚೆರೋಕೀ, ಜುನಿ-ಇವು ಉತ್ತರ ಅಮೆರಿಕದ ಮುಖ್ಯ ರೆಡ್ ಇಂಡಿಯನ್ ಜನವರ್ಗ ಗಳು.

ಆಜ್ಟೆಕ್, ನಿಕರಾಗುವನ್, ಮಾಯಾ-ಇವು ಮಧ್ಯ ಅಮೆರಿಕದ ಮುಖ್ಯ ಜನವರ್ಗಗಳು.

ಚಿಬೇಹಾ, ಚೆಕೊ, ಬಾರ್ಬಕೋವಾ, ಐಮಾರಾ, ಯುಂಕಾ, ಚಾಂಗೋ, ಅರವಾಕ್, ಕರೀಬ್-ಇವು ದಕ್ಷಿಣ ಅಮೆರಿಕದ ಮುಖ್ಯ ಜನವರ್ಗಗಳು.

ರೆಡ್ ಇಂಡಿಯನ್ ಭಾಷೆಗಳು: ಅಮೆರಿಕದಲ್ಲಿರುವ ಹಲವಾರು ಭಾಷಾ ಕುಟುಂಬಗಳಲ್ಲಿ ರೆಡ್ ಇಂಡಿಯನ್ ಭಾಷಾ ಕುಟುಂಬವೂ ಒಂದು. ಇದರಲ್ಲಿ ಮುಖ್ಯವಾದವು ಎಸ್ಕಿಮೊ, ಅಲ್ಗೋಂಕ್ಷಿಯನ್, ಅಥಬಾಸ್ಕನ್, ಉಟೋ-ಅಜ್‍ಬೆಕನ್, ಪೆನೂಟಿಯನ್, ಸಿಯೋವನ್, ಮಾಯನ್, ತಾರಸ್ಕನ್, ಮಿಕ್ಸೆಟಕನ್, ಜಪೋಟೆಕನ್, ಚಿಬೇಹ, ಅರವಾಕನ್, ಇಮಾರನ್, ಕರಿಬನ್ ಇತ್ಯಾದಿ. ಪ್ರತಿಯೊಂದು ಭಾಷಾ ಕುಟುಂಬದ ಲ್ಲಿಯೂ ಹಲವಾರು ಭಾಷೆಗಳಿವೆ.

ಸಾಮಾಜಿಕ-ರಾಜಿಕೀಯ ಸ್ಥಿತಿ: ಕೆನಡ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ರೆಡ್ ಇಂಡಿಯನರಿಗೆ ಪ್ರತ್ಯೇಕವಾಗಿ ಕಾದಿರಿಸಿದ ವಿಶಾಲವಾದ ಪ್ರದೇಶಗಳಿವೆ. ಈ ಪ್ರದೇಶಗಳಲ್ಲಿ ಇತರರ ಪ್ರವೇಶವನ್ನು ನಿಷೇಧಿಸಲಾಗಿದೆ. ಆದರೆ ರೆಡ್ ಇಂಡಿಯನ್ನರು ತಮಗೆ ಕಾದಿರಿಸಿದ ಯಾವುದೇ ಸ್ಥಳಗಳಲ್ಲಿ ನೆಲಸಲು ಸ್ವತಂತ್ರರು.            
	(ಎಚ್.ಕೆ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ